ಚೇಕಡಿಹಕ್ಕಿ
ಪ್ಯಾಸೆರಿಫಾರ್ಮಿಸ್ ಗಣದ ಪ್ಯಾರಿಡೀ ಕುಟುಂಬಕ್ಕೆ ಸೇರಿದ ಒಂದು ಪುಟ್ಟಹಕ್ಕಿ (ಟಿಟ್, ಟಿಟ್‍ಮೌಸ್), ಇದರಲ್ಲಿ ಅನೇಕ ಪ್ರಭೇದಗಳಿವೆ. ಬಹಳ ಮುಖ್ಯವಾದವು ಪ್ಯಾರಸ್ ಜಾತಿಗೆ ಸೇರಿದ 45 ಪ್ರಭೇಧಗಳು. ದಕ್ಷಿಣ ಅಮೆರಿಕ ಮತ್ತು ಆಸ್ಟ್ರೇಲಿಯಗಳನ್ನುಳಿದು ಪ್ರಪಂಚಾದ್ಯಂತ ಇವು ಕಾಣಸಿಗುತ್ತವೆ. ಭಾರತದಲ್ಲಿ ಪಾರಸ್ ಮೇಜರ್ ಎಂಬ ಪ್ರಭೇದದ ಜೊತೆಗೆ ಹಳದಿ ಕೆನ್ನೆಯ ಚೇಕಡಿ ಹಕ್ಕಿ (ಪಾರಸ್ ಜಾóಂಥೊಜೆನಿಸ್) ಹಾಗೂ ಬಿಳಿ ನೆತ್ತಿಯ ಚೇಕಡಿ ಹಕ್ಕಿ (ಪಾರಸ್ ನುಚಲಿಸ್) ಕಂಡುಬರುತ್ತವೆ. ಇದರಲ್ಲಿ ಬಿಳಿ ನೆತ್ತಿಯ ಚೇಕಡಿ ಹಕ್ಕಿ ಅಪಾಯಕ್ಕೆ ಪಕ್ಕಾಗುವ ಹಂತದಲ್ಲಿದೆ. ಬಯಲು ಪ್ರದೇಶಗಳಿಂದ ಹಿಡಿದು 6000 ಎತ್ತರದವರೆಗಿನ ಬೆಟ್ಟ ಸೀಮೆಗಳಲ್ಲಿ ಇದರ ವಾಸ. ಒಂಟೊಂಟಿಯಾಗಿ ಇಲ್ಲವೆ ಗುಂಪುಗಳಲ್ಲಿ ಬಲು ಚಟುವಟಿಕೆಯಿಂದ ಹಾರಾಡುತ್ತಾ ತಿರುಗುವುದುಂಟು. ಸಣ್ಣಪುಟ್ಟ ಕೀಟಗಳು, ಡಿಂಭಗಳು, ಮೊಗ್ಗುಗಳು, ಬೀಜಗಳೂ, ಕಿರುಗಾತ್ರದ ಹಣ್ಣುಗಳು ಇದರ ಮೆಚ್ಚಿನ ಆಹಾರ. ಆಹಾರವನ್ನು ಅರಸುವಾಗ ಮರಗಿಡಗಳ ರೆಂಬೆಗಳಿಂದ ತಲೆಕೆಳಕಾಗಿ ತೂಗು ಬೀಳುವುದು. ಒಂದೇ ಕಾಲಿನಲ್ಲಿ ರೆಂಬೆಯಿಂದ ರೆಂಬೆಗೆ ಜಿಗಿಯುವುದು ಮುಂತಾಗಿ ದೊಂಬರಾಟವಾಡುತ್ತದೆ. ಜೊತೆಗೆ ಜೋರಾಗಿ ಸಿಳ್ಳು ಹಾಕಿದಂತೆ ವೀ-ಚಿಚಿ, ವೀ-ಚಿಚಿ ಎಂದು ಸಂತಸದಿಂದ ಹಾಡುವುದು. ಚೇಕಡಿ ಹಕ್ಕಿ ಬಹಳ ಸಣ್ಣ ಗಾತ್ರದ ಹಕ್ಕಿ; ಗುಬ್ಬಚ್ಚಿಯಷ್ಟಿದೆ. ಇದರ ತಲೆ ಕಪ್ಪು. ಕೆನ್ನೆಗಳ ಬಳಿ ಬಿಳಿ ಮುಚ್ಚಿಗಳಿವೆ. ಬೆನ್ನು ಬೂದುಬಣ್ಣದ್ದು. ಹೊಟ್ಟೆ ಬಿಳಿ. ಕತ್ತಿನಿಂದ ಬಾಲದ ಬುಡದವರೆಗೆ ಉದರಭಾಗದಲ್ಲಿ ಕರಿಯ ಪಟ್ಟಿಯೊಂದಿದೆ. ಗಂಡು ಹೆಣ್ಣುಗಳೆರಡೂ ನೊಡಲು ಒಂದೇ ತರಹ ಇವೆ. ಫೆಬ್ರವರಿ-ನವೆಂಬರ್ ತಿಂಗಳುಗಳು ಚೇಕಡಿಹಕ್ಕಿ ಮೊಟ್ಟೆಯಿಡುವ ಕಾಲ. ಮರದ ಪೊಟರೆ, ಗೋಡೆಗಳ ಬಿರುಕು ಮುಂತಾದೆಡೆ ಹಾವಸೆ, ಗರಿ ಮೊದಲಾದವನ್ನು ಬಳಸಿ ಗೂಡುಕಟ್ಟುತ್ತದೆ. ಮೊಟ್ಟೆಗಳ ಸಂಖ್ಯೆ ಒಂದು ಸೂಲಿಗೆ 4-6. ಗಂಡು, ಹೆಣ್ಣು ಹಕ್ಕಿಗಳೆರಡೂ ಕಾವೂ ಕೊಡುವ, ಮರಿಗಳನ್ನು ಪೊಷಿಸುವ ಕಾರ್ಯದಲ್ಲಿ ಪಾಲುಗೊಳ್ಳುತ್ತವೆ.
(ಎನ್.ಎಂ.)
(ಪರಿಷ್ಕರಣೆ : ಕೆ ಎಸ್ ನವೀನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ